ರಾಮಸ್ವಾಮಿ ಅಯ್ಯಂಗಾರ್, ಗೊರೂರು
1904-91. ಆಧುನಿಕ ಕನ್ನಡ ಸಾಹಿತ್ಯಕ್ಕೆ ಆಳ ವಿಸ್ತಾರಗಳನ್ನೂ ವೈವಿಧ್ಯ ವೈಶಿಷ್ಟ್ಯಗಳನ್ನೂ ತಂದುಕೊಟ್ಟ ಗಣ್ಯ ಲೇಖಕರಲ್ಲೊಬ್ಬರು; ಸುಪ್ರಸಿದ್ಧ ಪ್ರಬಂಧಕಾರರು, ಗಾಂಧೀವಾದಿಗಳು. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗೊರೂರು ಗ್ರಾಮದಲ್ಲಿ 4-7-1904ರಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಹನ್ನೆರಡು ಮಕ್ಕಳ ಈ ದೊಡ್ಡ ಸಂಸಾರದಲ್ಲಿ ಗೊರೂರು ಗಂಡುಮಕ್ಕಳಲ್ಲಿ ಎರಡನೆಯವರು. ಅಜ್ಜಿಯವರಿಗೆ ತಂದೆ ಹೇಳುತ್ತಿದ್ದ ಮಹಾಭಾರತ ಪುರಾಣಗಳನ್ನು ಬಾಲ್ಯದಲ್ಲಿಯೇ ಕೇಳಿ ಅವುಗಳಿಂದ ಪ್ರಭಾವಿತರಾದರು. ತಮ್ಮ ಹಳ್ಳಿಯಲ್ಲಿಯೇ ಕನ್ನಡ-ಇಂಗ್ಲಿಷ್ ಲೋಯರ್ ಸೆಕೆಂಡರಿಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಪ್ರೌಢ ವಿದ್ಯಾಭ್ಯಾಸ ಮಾಡಲು ಹಾಸನದ ಸರ್ಕಾರಿ ಹೈಸ್ಕೂಲನ್ನು ಸೇರಿದರು. ಹೈಸ್ಕೂಲಿನಲ್ಲಿ ಐದನೆಯ ಫಾರಂನಲ್ಲಿದ್ದಾಗ ಗಾಂಧೀಜಿಯವರ ಅಸಹಕಾರ ಚಳವಳಿಯಿಂದ ಆಕರ್ಷಿತರಾಗಿ, ಇಂಗ್ಲಿಷ್ ವಿದ್ಯೆಗೆ ಶರಣು ಹೊಡೆದು ಗಾಂಧೀಜಿಯವರ ಆಶ್ರಮವನ್ನು ಸೇರಿ ಗುಜರಾತ್ ವಿದ್ಯಾಪೀಠದ ವಿದ್ಯಾರ್ಥಿಯಾದರು. ಗಾಂಧೀಜಿಯವರ ನಿಕಟ ಸಂಪರ್ಕ ಪಡೆದು ದೇಶಸೇವೆ ಮಾಡಲು ತಕ್ಕ ಯೋಗ್ಯತೆಯನ್ನು ಗಳಿಸಿ, ಮದರಾಸಿನ ಲೋಕಮಿತ್ರ ಎಂಬ ಕನ್ನಡ ಪತ್ರಿಕೆಯ ಉಪಸಂಪಾದಕರಾಗಿ, ಆಂಧ್ರಪತ್ರಿಕೆ, ಭಾರತಿಪತ್ರಿಕೆಗಳಿಗೆ ಕನ್ನಡ ಸಮಾಚಾರ ಲೇಖಕರಾಗಿ ಕೆಲವು ಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು. ಆ ಗುರುಕುಲ ಸಬರಮತಿ ಆಶ್ರಮದ ಮಾದರಿಯಲ್ಲಿ ನಡೆಯುತ್ತಿತ್ತು. ಹರಿಜನರನ್ನು ಸಾಮಾಜಿಕವಾಗಿ ಮೇಲಕ್ಕೆತ್ತುವುದೇ ಅದರ ಮುಖ್ಯೋದ್ದೇಶ ಆಗಿತ್ತು. ಈ ಕಾರ್ಯವನ್ನು ಇವರು ಇಲ್ಲಿ ಸಮರ್ಥವಾಗಿ ನಡೆಸಿದರು. ಅನಂತರ ಬೆಂಗಳೂರಿಗೆ ಬಂದು ಅಖಿಲಭಾರತ ಚರಕ ಸಂಘದ ಖಾದಿ ವಸ್ತ್ರಾಲಯವನ್ನು ನಡೆಸುವ ಹೊಣೆಯನ್ನು ಹೊತ್ತರು. ಈ ಶತಮಾನದ ಮೂರು, ನಾಲ್ಕನೆಯ ದಶಕಗಳು ರಾಷ್ಟ್ರೀಯ ಚಳವಳಿಗೆ ಹೆಸರಾಗಿರುವಂತೆ, ಕನ್ನಡ ಸಾಹಿತ್ಯದ ನವೋದಯಕ್ಕೂ ಹೆಸರಾಗಿವೆ. ಬೆಂಗಳೂರಿನ ಆವರಣ ಇವರಿಗೆ ಅನೇಕ ಪ್ರಮುಖ ದೇಶಸೇವಕರನ್ನು ಪರಿಚಯಮಾಡಿಕೊಟ್ಟಿತು; ಸೀತಾತನಯ, ಜಿ. ಕೆ. ರಾಮಸ್ವಾಮಿ ಎಂಬ ಹೆಸರುಗಳಿಂದ ಬರೆಯುತ್ತಿದ್ದ ಇವರಿಗೆ ಆ ಕಾಲದ ಸುಪ್ರಸಿದ್ಧ ಸಾಹಿತಿಗಳ ಸಾನ್ನಿಧ್ಯವನ್ನೂ ಗ್ರಂಥರಚನೆಗೆ ಒಳ್ಳೆಯ ಪ್ರೋತ್ಸಾಹವನ್ನೂ ದೊರಕಿಸಿಕೊಟ್ಟಿತು. ಗೊರೂರರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟ ಹಳ್ಳಿಯ ಚಿತ್ರಗಳು (1930), ನಮ್ಮ ಊರಿನ ರಸಿಕರು (1932)-ಈ ಕೃತಿಗಳು ಪ್ರಕಟವಾದದ್ದು ಈ ಕಾಲದಲ್ಲಿಯೇ. ಅಲ್ಲಿಂದೀಚೆಗೆ ಇವರ ವೈವಿಧ್ಯಮಯ ಸಾಹಿತ್ಯರಚನೆ ಅವ್ಯಾಹತವಾಗಿ ಸಾಗಿತ್ತು. 1933ರಲ್ಲಿ ಇವರು ತಮ್ಮ ಸ್ವಂತ ಗ್ರಾಮಕ್ಕೆ ಹಿಂದಿರುಗಿ, ಅಲ್ಲಿ ಮೈಸೂರು ಗ್ರಾಮ ಸೇವಾ ಸಂಘವನ್ನು ಸ್ಥಾಪಿಸಿ ಖಾದಿಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡರು. 1942ರಲ್ಲಿ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ `ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆವಾಸವನ್ನು ಅನುಭವಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ಮೈಸೂರಿನಲ್ಲಿ ಪ್ರಜಾಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು (ಈ ಚಳವಳಿಯಲ್ಲಿ ಭಾಗವಹಿಸಿದ್ದ ಇವರ ಹಿರಿಯ ಮಗ 17 ವರ್ಷದ ರಾಮಚಂದ್ರ ತುಮಕೂರಿನಲ್ಲಿ ಪೋಲಿಸಿನವರ ಗುಂಡಿಗೆ ಬಲಿಯಾದ). ಮೈಸೂರಿನಲ್ಲಿ ಪ್ರಜಾಸರ್ಕಾರ ಸ್ಥಾಪಿತವಾದ ಮೇಲೆ ಗೊರೂರರು ಸುಮಾರು ಹನ್ನೆರಡು ವರ್ಷಕಾಲ ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸಭೆಯ ಸದಸ್ಯರೂ ಆಗಿದ್ದರು. ತಮ್ಮ ಈ ಅಧಿಕಾರದ ಅವಧಿಯಲ್ಲಿ ಮೈಸೂರು ಸರ್ಕಾರ ಸಾಧಿಸಿದ ಕರ್ನಾಟಕ ಏಕೀರಣಕ್ಕೆ ಬೆಂಬಲವನ್ನು ನೀಡಿದರಲ್ಲದೆ, ಕನ್ನಡದ ಸರ್ವತೋಮುಖವಾದ ಬೆಳೆವಣಿಗೆಗೂ ಶ್ರಮಿಸಿದರು.		(ವಿ.ಎಂ.ವಿ.)   

ಗೊರೂರು ರಾಮಸ್ವಾಮಿ ಅಯ್ಯಂಗಾರರ ಸಮಾಜಸೇವೆ, ಖಾದಿಪ್ರಚಾರ ಅಪ್ಪಟ ಗಾಂಧೀವಾದ ಇವೆಲ್ಲವನ್ನೂ ಮೀರಿ ಶಾಶ್ವತವಾಗಿ ನಿಲ್ಲತಕ್ಕದ್ದು ಅವ್ಯಾಹತವಾಗಿ ಅರ್ಧಶತಮಾನ ಇವರು ನಡೆಸಿರುವ ಕನ್ನಡ ಸಾಹಿತ್ಯಸೇವೆ. ಹೊಸಗನ್ನಡ ಸಾಹಿತ್ಯದಲ್ಲಿ ನಿರ್ಮಲವಾದ, ತಿಳಿಯಾದ ಹಾಸ್ಯವನ್ನು ಹರಿಯ ಬಿಟ್ಟವರೆಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಹೆಚ್ಚುಕಡಿಮೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಇವರು ಕೃತಿಗಳನ್ನು ರಚಿಸಿದ್ದಾರೆ. ಪುಸ್ತಕ ರೂಪದಲ್ಲಿ ಪ್ರಕಟವಾಗದ ಇವರ ಕವನಗಳು, ಪತ್ರಿಕೆಗಳಲ್ಲಿ ಹಾಗೂ ಅಭಿನಂದನ ಗ್ರಂಥಗಳಲ್ಲಿ ಚದುರಿಹೋಗಿರುವ ಬಿಡಿಲೇಖನಗಳನ್ನು ಬಿಟ್ಟರೆ, ಗೊರೂರರ ಕೃತಿಗಳ ಸಂಖ್ಯೆ ಸುಮಾರು 44 ಆಗುತ್ತದೆ. ಇವರ ಸಾಹಿತ್ಯವನ್ನು ಕಥೆ, ಕಾದಂಬರಿ, ಪ್ರಬಂಧ, ಜೀವನಚರಿತ್ರೆ-ಇವೇ ಮೊದಲಾದ ಪ್ರಕಾರಗಳನ್ನೊಳಗೊಂಡಂತೆ ಶುದ್ಧಸಾಹಿತ್ಯ, ಅನುವಾದಸಾಹಿತ್ಯ, ಗಾಂಧೀಸಾಹಿತ್ಯವೆಂದು ಮೂರು ವಿಧವಾಗಿ ವಿಂಗಡಿಸಬಹುದು. ಇವರ ಮೊದಲನೆಯ ಪುಸ್ತಕ `ಭಾರತದ ಸ್ವಾತಂತ್ರ್ಯ ಪ್ರಕಟವಾಗಿದ್ದು 1930ರಲ್ಲಿ. ಇವರು ರಚಿಸಿರುವ ಹೇಮಾವತಿ (1948) ಎಂಬ ಕಾದಂಬರಿ ಹರಿಜನೋದ್ಧಾರ ಸಮಸ್ಯೆಗೆ ಸಂಬಂಧಿಸಿದ್ದು. ಯಾವುದೋ ಕ್ಷಣದಲ್ಲಿ ಜಾರಿಬಿದ್ದ ಹೆಣ್ಣು ಎಚ್ಚೆತ್ತು ಉದ್ಧಾರವಾದ ಕಥೆ ಊರ್ವಶಿ ಕಾದಂಬರಿಯಲ್ಲಿದೆ. ತಿಳಿಯಾದ ಹಾಸ್ಯಲೇಖಕರೆಂದು ಇವರಿಗೆ ಕೀರ್ತಿ ತಂದ ಹಳ್ಳಿಯ ಚಿತ್ರಗಳು ಮತ್ತು ನಮ್ಮ ಊರಿನ ರಸಿಕರು ಎಂಬ ಪ್ರಬಂಧ ಗ್ರಂಥಗಳು ವೈದಿಕ ಮತ್ತು ಜನಪದ ಸಂಸ್ಕøತಿಯನ್ನು ಮೈಗೂಡಿಸಿಕೊಂಡ ಸರಳ ನಿಸ್ಪøಹ ಸಂತೃಪ್ತ ಗ್ರಾಮಜೀವನವನ್ನು ಚಿತ್ರಿಸುತ್ತವೆ. ಮೆರವಣಿಗೆ (1947) ಇವರ ಪ್ರಬಂಧಗಳಲ್ಲೆಲ್ಲ ಅತಿ ದೊಡ್ಡ ಗ್ರಂಥ. ಇದರಲ್ಲಿ ಹಾರುವರಿಂದ ಹಿಡಿದು ಹರಿಜನರವರೆಗಿನ ಎಲ್ಲ ರೀತಿಯ ಜನರನ್ನೂ ವಿವಿಧ ರೀತಿನೀತಿಯ ಅಧಿಕಾರಿವರ್ಗವನ್ನೂ ಅವರ ಗುಣದೋಷಗಳೊಡನೆ ಸಹಾನುಭೂತಿಯ ಕಣ್ಣಿನಿಂದ ನೋಡಿದ್ದಾರೆ. ಇವರ ಮಿಕ್ಕ ಪ್ರಬಂಧಗಳಲ್ಲಿ ಗರುಡಗಂಬದ ದಾಸಯ್ಯ (1965), ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು (1967), ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು (1972), ಕಥೆಗಳು ಮತ್ತು ವಿನೋದ ಚಿತ್ರಗಳು, ಬೈಲುಹಳ್ಳಿಯ ಸರ್ವೆ-ಈ ಗ್ರಂಥಗಳನ್ನು ಹೆಸರಿಸಬಹುದು. ಗೊರೂರರ ಪ್ರಬಂಧಗಳು ಯಾವಾಗ ಸಣ್ಣಕಥೆಗಳಾಗುತ್ತವೆಯೆಂದು ಹೇಳುವುದು ಕಷ್ಟ. ಇವರ ಪ್ರಬಂಧಗಳಲ್ಲಿ ಕಥೆ ಹುದುಗಿರುತ್ತದೆ. ಕಥೆ ಪ್ರಬಂಧದ ಆಕಾರವನ್ನೂ ತಾಳಬಹುದು. ಇವರ ಸಣ್ಣಕಥೆಗಳಲ್ಲಿ ವೈಯಾರಿ, ಶಿವರಾತ್ರಿ, ಕಮ್ಮಾರ ವೀರಭದ್ರಾಚಾರಿ, ಉಸುಬು, ಕನ್ಯಾಕುಮಾರಿ, ಗೋಪುರದಬಾಗಿಲು, ಬೆಸ್ತರ ಕರಿಯ, ಭೂತಯ್ಯನ ಮಗ ಅಯ್ಯು ಮುಖ್ಯವಾದುವು. ತಮಿಳಿನಿಂದ ಕನ್ನಡಕ್ಕೆ ತಂದಿರುವ ಕೊನಷ್ಟ್ಯೆ ಕಥೆಗಳಲ್ಲಿ ತಿಳಿಯಾದ ಹಾಸ್ಯ ಮಿನುಗುತ್ತದೆ. ಘನವಾದ ಭಾವನೆ ಮತ್ತು ವಸ್ತುಗಳನ್ನೊಳಗೊಂಡ ಕೆ. ಎಂ. ಮುನ್ಷಿಯವರ ಭಗವಾನ್ ಕೌಟಿಲ್ಯ, ರಾಮಚಂದ್ರ ಠಾಕೂರರ ರಾಜ ನರ್ತಕಿ, ವಿ. ಎಸ್. ಖಾಂಡೇಕರ್ ಅವರ ಕ್ರೌಂಚವಧೆ, ಟಾಲ್‍ಸ್ಟಾಯ್ ಅವರ ಕೊಸಕ್ಸ್-ಈ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಗೊರೂರರ ಗಾಂಧೀ ಸಾಹಿತ್ಯದ ಅನುವಾದಗಳಲ್ಲಿ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ, ಪೂರ್ಣ ಸ್ವದೇಶಿ, ಭಾಷಣಗಳು ಮತ್ತು ಹೇಳಿಕೆಗಳು-ಇವುಗಳನ್ನು ಮುಖ್ಯವಾಗಿ ಹೆಸರಿಸಬಹುದು. ಮಹಾತ್ಮಾ ಗಾಂಧೀಯವರ ದಕ್ಷಿಣಯಾತ್ರೆ, ಭಾರತ ಭಾಗ್ಯವಿಧಾತ-ಇವು ಗಾಂಧೀಜಿಯವರನ್ನು ಕುರಿತು ಇವರು ಬರೆದ ಸ್ವತಂತ್ರ ಕೃತಿಗಳು. ನಮ್ಮ ನಾಡಿನ ಹಲವು ಉದ್ಗ್ರಂಥಗಳನ್ನು ಕುರಿತ ವಿಮರ್ಶೆಗಳ ಸಂಗ್ರಹಗಳೆಂದರೆ ಸಾಹಿತ್ಯ ರಶ್ಮಿ (1963) ಮತ್ತು ಸಾಹಿತ್ಯದ ಸ್ವರೂಪ. ಕಾಲಕಾಲಕ್ಕೆ ವೃದ್ಧಿಗೊಂಡು ನವೋದಯದ ಕಾಲದ ಆರಂಭದಲ್ಲಿ ಹೊರಬಿದ್ದ ಹಳ್ಳಿಯ ಹಾಡುಗಳು (1938) ಸೊಗಸಾದ ಜನಪದ ಸಾಹಿತ್ಯದ ತ್ರಿಪದಿಗಳ ಸಂಗ್ರಹವಾದರೆ, ಹಳ್ಳಿಯ ಬಾಳು (1943) ಜನಪದ ಸಾಹಿತ್ಯದ ಮೇಲಿನ ಸೊಗಸಾದ ವ್ಯಾಖ್ಯಾನ. ಜನಪದ ಜೀವನ ಮತ್ತು ದರ್ಶನ ಇದೇ ಬಗೆಯ ಇವರ ಇನ್ನೊಂದು ಕೃತಿ (1974). ಭಾರತೀಯ ಸಮಾಜದ ಜನರ ಲೋಪದೋಷಗಳನ್ನು ಸಹಾನುಭೂತಿಯಿಂದ ಕಂಡು, ಕನಿಕರಿಸಿ, ಮುಳ್ಳುಮುರಿಯದ ವಿಡಂಬನದಿಂದ ಟೀಕಿಸಿ ಎಲ್ಲಕ್ಕೂ ಮಿಗಿಲಾಗಿ ಯಾರಿಗೂ ನೋವಾಗದಂತೆ ಎಲ್ಲರೂ ನಲಿಯುವಂತೆ ತಮ್ಮ ಕೃತಿಗಳ ಮೇಲೆ ಹಾಸ್ಯದ ಪನ್ನೀರನ್ನು ಚಿಮುಕಿಸಿ ಬದುಕನ್ನು ಸಹ್ಯವನ್ನಾಗಿ ಮಾಡಿ, ಅದರ ವಿಷಯದಲ್ಲಿ ಗೌರವನ್ನು ಮೂಡಿಸಿರುವ ಗೊರೂರು ಕನ್ನಡ ವಾಚಕಕೋಟಿಯ ಹೃದಯವನ್ನು ಗೆದ್ದುಕೊಂಡಿದ್ದಾರೆ.
ಜನಸಾಮಾನ್ಯರಲ್ಲಿ ಬೆರತು, ಅವರಲ್ಲಿ ಒಬ್ಬರಾಗಿ ಸಾಹಿತ್ಯ ಮತ್ತು ಸಮಾಜಸೇವೆಗಳನ್ನು ಸಲ್ಲಿಸಿರುವ ಗೊರೂರರಿಗೆ ಹಲವು ಬಗೆಯ ಗೌರವಗಳು ಲಭಿಸಿವೆ. 1967ರಲ್ಲಿ ತರೀಕೆರೆಯಲ್ಲಿ ನಡೆದ ಮೊದಲನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. 1969ರಲ್ಲಿ ರಾಜ್ಯ ಸಾಹಿತ್ಯ ಅಕೆಡಮಿ ಇವರನ್ನು ಗೌರವಿಸಿತು. 1971ರಲ್ಲಿ ಹಾಸನ ಜಿಲ್ಲಾ ಸಾಹಿತ್ಯಸಮ್ಮೇಳನ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಇವರ ಎಪ್ಪತ್ತನೆಯ ಹುಟ್ಟುಹಬ್ಬದಂದು (1973) ಇವರಿಗೆ ಗೊರೂರು ಗೌರವ ಗ್ರಂಥ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿ ಸನ್ಮಾನಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯ 1974ರಲ್ಲಿ ಇವರಿಗೆ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಗೊರೂರು 1991 ಸೆಪ್ಟೆಂಬರ್ 28ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಗೊರೂರರು ಹಿಂದಿನ ಮೈಸೂರು ಸಂಸ್ಥಾನದ ಹಳ್ಳಿಗಳ ಬದುಕನ್ನು ಬಹು ದೊಡ್ಡ ಪ್ರಮಾಣದಲ್ಲಿ ಸಾಹಿತ್ಯಕ್ಕೆ ತಂದರು. ಜಮೀನ್ದಾರರು, ಗಂಡುಬೀರಿ ಹೊಸಬಿ, ಬೆಸ್ತರ ಕರಿಯ, ತೂರ ಮುಂತಾದ ಮರೆಯಲಾಗದ ಪಾತ್ರಗಳನ್ನು ಸೃಷ್ಟಿಸಿದರು. ಈ ಬದುಕನ್ನು ಶುದ್ಧವಾದ, ಸಂಜಾಗು ಮೇಲರಿಮೆಯಾಗು ಇಲ್ಲದೆ ಹಾಸ್ಯದ ದೃಷ್ಟಿಯಿಂದ ನೋಡಿ ಚಿತ್ರಿಸಿದರು. ಬಹುಮುಖ್ಯವಾದ ಸಂಗತಿ ಎಂದರೆ, ಹಳ್ಳಿಯ ಜೀವನವನ್ನು ಪ್ರೀತಿಯಿಂದ ಆದರೆ ಆದರ್ಶೀಕರಣಗೊಳಿಸದೆ ಪುನರ್‍ಸೃಷ್ಟಿಸಿದರು. ಹಳ್ಳಿಯವರ ಮುಗ್ಧತೆ, ಸಹಕಾರ ಮನೋಭಾವ, ನೆರವಾಗುವ ಸ್ವಭಾವ ಇವುಗಳೊಂದಿಗೆ ಛಲ, ದ್ವೇಷ, ಮೂಢನಂಬಿಕೆಗಳನ್ನು ಚಿತ್ರಿಸಿದರು. 'ಭೂತಯ್ಯನ ಮಗ ಅಯ್ಯುವಿನಂಥ ಹಲವು ಗಟ್ಟಿ ಸತ್ಯದ ಕಥೆಗಳನ್ನು ಬರೆದರು.
ಗೊರೂರರ ಸಾಹಿತ್ಯ, ಒಂದು ಕಾಲದ ಜನಜೀವನದ ಅದ್ಭುತ ದಾಖಲೆಯೂ ಹೌದು. ಕಾಲ ಕಳೆದಂತೆ ಈ ದೃಷ್ಟಿಯಿಂದ ಈ ಸಾಹಿತ್ಯದ ಮೌಲ್ಯ ಬೆಳೆಯುತ್ತದೆ.

ಪರಿಷ್ಕರಣೆ:
ಎಲ್. ಎಸ್. ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ